ಜಯಸಿಂಹ
ಭಾರತ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಈ ಹೆಸರಿನ ಅನೇಕ ಅರಸರೂ ಮಾಂಡಲಿಕರೂ ಇದ್ದಾರೆ. ಅವರಲ್ಲಿ ಪ್ರಮುಖರಾದ ಕೆಲವರ ಬಗ್ಗೆ ಇಲ್ಲಿ ವಿವರಗಳಿವೆ. (ನೋಡಿ- ಜಯಸಿಂಹ,-ಸವಾಯಿ)

1 ಬಾದಾಮಿ ಚಾಳುಕ್ಯರ ಮೂಲಪುರುಷ. ಒಂದನೆಯ ಪುಲಕೇಶಿಯ ತಾತ. ಕ್ರಿ. ಶ. ಸು. 500-520ರಲ್ಲಿ ಈತ ಉನ್ನತವಾದ ಅಧಿಕಾರ ಪಡೆದು ತನ್ನ ಪ್ರಾಬಲ್ಯವನ್ನು ಬೆಳೆಸಿ ಕೊಂಡಿರಬೇಕು.

2 1015-1044. ಬಾದಾಮಿ ಚಾಳುಕ್ಯ ಅರಸ. ಈತನನ್ನು ಇಮ್ಮಡಿ ಜಯಸಿಂಹನೆಂದು ಕರೆಯಲಾಗಿದೆ, ಜಗದೇಕಮಲ್ಲ, ಮಲ್ಲಿಕಾಮೋದ-ಇವು ಈತನ ಬಿರುದುಗಳು. ಕಳಚುರಿ ಗಾಂಗೇಯದೇವ ಮತ್ತು ಚೋಳ ರಾಚೇಂದ್ರರೊಡಗೂಡಿ ಪರಮಾರ ಭೋಜ, ಇವನ ರಾಜ್ಯವನ್ನು ಮುತ್ತಿದ. ಗೋದಾವರೀ ತೀರದಲ್ಲಿ ನಡೆದ ಕದನದಲ್ಲಿ ಜಯಸಿಂಹ ಈ ಮುಕ್ಕೂಟ ಸೈನ್ಯವನ್ನು ಸೋಲಿಸಿ ದಿಕ್ಕಾಪಾಲಾಗಿ ಓಡುವಂತೆ ಮಾಡಿದ. ಕೊಂಕಣವನ್ನು ಆಕ್ರಮಿಸಿದ್ದ ಭೋಜನಿಂದ ಅದನ್ನು ಹಿಂದಕ್ಕೆ ಪಡೆದ. ಸಾಮಂತನಾದ ಸೇವುಣ 3ನೆಯ ಭಿಲ್ಲಮನ ದಂಗೆಯನ್ನು ಹತ್ತಿಕ್ಕಿ ಆತನ ನೆರವನ್ನು ಕಳೆದುಕೊಳ್ಳಬಾರದೆಂದು ತನ್ನ ಮಗಳು ಅವ್ವಲ್ಲದೇವಿಯನ್ನು ಅವನಿಗೆ ಧಾರೆಯೆರೆದುಕೊಟ್ಟ. ಚೋಳರು ಈತನ ಪ್ರಬಲ ಶತ್ರುಗಳಾಗಿದ್ದರು. ಜಯಸಿಂಹನಿಗೂ ಚೋಳರಿಗೂ ನಡೆದ ಬಹುಪಾಲು ಕದನಗಳು ಪೂರ್ವದ ವೇಂಗಿಯನ್ನು ವಶಪಡಿಸಿಕೊಳ್ಳಲು ಆದವೇ. ಅಂದು ವೇಂಗಿಯ ಚಾಳುಕ್ಯರು ಬಲಹೀನರಾಗಿದ್ದುದ್ದರಿಂದ ಇಬ್ಬರೂ ಅಲ್ಲಿಯ ರಾಜಕೀಯದಲ್ಲಿ ತಲೆ ಹಾಕಿ ತಮಗೆ ಬೇಕಾದವರನ್ನು ಪಟ್ಟಕ್ಕೆ ತರಲು ಪ್ರಯತ್ನಿಸಿದರು. 1021ರ ಸುಮಾರಿಗೆ ಮಾಸ್ಕಿಯ ಕದನದಲ್ಲಿ ಜಯಸಿಂಹ ಚೋಳರನ್ನೆದುರಿಸಿ ಸೋತ. ಅನಂತರದ ಬೆಜವಾಡ ಕದನದಲ್ಲಿ ಚಾಳುಕ್ಯ ದಂಡನಾಯಕ ವಾವಣರಸ ಅಲ್ಲಿಯ ಕೋಟೆಯನ್ನು ವಶಪಡಿಸಿಕೊಂಡ. ತನ್ನ ನೆರವನ್ನು ಬಯಸಿದ್ದ 7ನೆಯ ವಿಕ್ರಮಾದಿತ್ಯನನ್ನು ಜಯಸಿಂಹ ವೇಂಗಿಯ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಜಯಸಿಂಹನಿಗೆ ಸುಗ್ಗಲದೇವಿ, ದೇವಲದೇವಿ ಮತ್ತು ಲಕ್ಷ್ಮಾದೇವಿ ಎಂಬ ಮೂವರು ಪತ್ನಿಯರಿದ್ದರು. ಸೋಮೇಶ್ವರ ಮತ್ತು 3ನೆಯ ಜಯಸಿಂಹ ಈತನ ಮಕ್ಕಳು. ಅಕ್ಕಾ ದೇವಿ ಈತನ ಸೋದರಿ.

3 ಚಾಳುಕ್ಯ ಸೋಮೇಶ್ವರನ ತಮ್ಮ : 3ನೆಯ ಜಯಸಿಂಹ. ಈತ ಸಮ ರೈಕಮಲ್ಲನೆನಿಸಿಕೊಂಡಿದ್ದ. ಚೋಳರ ವಿರುದ್ಧ ನಡೆದ ಕದನವೊಂದರಲ್ಲಿ ಈತ ತೀರಿಕೊಂಡ.

4 ಚಾಳುಕ್ಯ ಸೋಮೇಶ್ವರನ ಕಿರಿಯ ಮಗ ; 4ನೆಯ ಜಯಸಿಂಹ. ಈತನ ಅಣ್ಣಂದಿರಾದ ಭುವನೈಕಮಲ್ಲ ಸೋಮೇಶ್ವರ ಹಾಗೂ 6ನೆಯ ವಿಕ್ರಮಾದಿತ್ಯರ ನಡುವೆ ನಡೆದ ಕದನದಲ್ಲಿ ವಿಕ್ರಮಾದಿತ್ಯನ ಪಕ್ಷ ವಹಿಸಿದ. 2ನೆಯ ಸೋಮೇಶ್ವರನ ಆಳ್ವಿಕೆಯಲ್ಲಿ ಬೆಳ್ವೊಲ ಮತ್ತು ಪುರಿ¾Âು ಪ್ರಾಂತ್ಯಗಳ ಆಧಿಪತ್ಯವನ್ನೂ ಅನಂತರ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಕೋಗಳಿ 1000, ಕುಂದೂರು 1000, ಬನವಾಸಿ 12000, ಸಾಂತಳಿಗೆ 1000 ಮುಂತಾದ ಪ್ರಾಂತ್ಯಗಳ ಆಧಿಪತ್ಯವನ್ನೂ ವಹಿಸಿಕೊಂಡು ಯುವರಾಜನೆನಿಸಿಕೊಂಡಿದ್ದ. ಆದರೆ ಕೆಲವೇ ವರ್ಷಗಳಲ್ಲಿ ಅಣ್ಣನ ವಿರುದ್ಧ ಈತ ದಂಗೆ ಎದ್ದ. ವಿಕ್ರಮಾದಿತ್ಯ ಈತನ ದಂಗೆಯನ್ನಡಗಿಸಿ ಸೆರೆಯಲ್ಲಿಟ್ಟು ಬುದ್ಧಿವಾದ ಹೇಳಿದನೆಂದು ಬಿಲ್ಹಣ ಕವಿಯ ಹೇಳಿಕೆ. ಆದರೆ ಇದರ ಬಗ್ಗೆ ಐತಿಹಾಸಿಕ ದಾಖಲೆಗಳೇನೂ ಇಲ್ಲ. ಈತನ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ.

5 ಪೂರ್ವ ಚಾಳುಕ್ಯ ಮನೆತನದ ಮೂಲಪುರುಷನಾದ ವಿಷ್ಣುವರ್ಧನನ ಹಿರಿಯಮಗ. 641ರಿಂದ 678ರ ವರೆಗೆ ಈತ ವೇಂಗಿಯ ಅರಸನಾಗಿದ್ದ. ವಿಶಾಖ ಪಟ್ಟಣದಿಂದ ಜಂಗೋಲುವರೆಗಿನ ಪೂರ್ವತೀರಪ್ರದೇಶ ಈತನ ಅಧೀನದಲ್ಲಿತ್ತು. ಇವನಿಗೆ ಮಕ್ಕಳಿಲ್ಲದ ಕಾರಣ ತಮ್ಮನಾದ ಇಂದ್ರಭಟ್ಟಾರಕ ಪಟ್ಟಕ್ಕೆ ಬಂದ.

6 ಇಮ್ಮಡಿ ಜಯಸಿಂಹ 705ರಿಂದ 717ರವರೆಗೆ ವೇಂಗಿಯನ್ನು ಆಳಿದ. ಸಕಲ ಲೋಕಾಶ್ರಯ, ಸರ್ವಸಿದ್ಧಿ, ನಿರವದ್ಯ ಎಂಬ ಬಿರುದುಗಳನ್ನು ಧರಿಸಿದ್ದ ಈತ ಮಂಗಿ ಯುವರಾಜನ ಮಗ.

7 ಮಾಲವದೇಶದಲ್ಲಿ ಆಳಿದ ಪರಮಾರ ವಂಶದ ಪರಮಾರ ಭೋಜನ ಉತ್ತರಾಧಿಕಾರಿಯಾಗಿ 1ನೆಯ ಜಯಸಿಂಹ 1055ರಲ್ಲಿ ಆಳತೊಡಗಿದ. ಭೋಜ ಗತಿಸಿದ ಬಳಿಕ ರಾಜ್ಯಕ್ಕಾಗಿ ನಡೆದ ಕಲಹಗಳಲ್ಲಿ ಈತನೂ ಪಾಲ್ಗೊಂಡಿದ್ದ. ಈತನಿಗೂ ಭೋಜನಿಗೂ ನಡುವಣ ಸಂಬಂಧವೆಂಥದೆಂಬುದು ತಿಳಿಯದು. ಈತನ ಪ್ರತಿಸ್ಪರ್ಧಿ ಇನ್ನೊಬ್ಬ ಹಕ್ಕುದಾರನಾದ ಉದಯಾದಿತ್ಯ. ರಾಜ್ಯವನ್ನು ಪಡೆಯಲು ಜಯಸಿಂಹ ಕಲ್ಯಾಣದ ಚಾಳುಕ್ಯ ಅರಸನಾದ 1ನೆಯ ಸೋಮೇಶ್ವರನ ನೆರವನ್ನು ಕೋರಿದ. ಆಗ ಯವರಾಜನಾಗಿದ್ದ ವಿಕ್ರಮಾದಿತ್ಯ ಈತನ ಬೆಂಬಲಕ್ಕೆ ಬಂದು ಈತನ ಮೇಲೆರಗಿದ್ದ ಶತ್ರುಗಳನ್ನು ಓಡಿಸಿ ಈತನನ್ನು ಸಿಂಹಾಸನದ ಮೇಲೆ ಕೂಡಿಸಿದ. ಬಹುಶಃ ಈ ಸಂದರ್ಭದಲ್ಲಿ ಜಯಸಿಂಹನ ಮಗಳನ್ನು ವಿಕ್ರಮಾದಿತ್ಯ ಮದುವೆಯಾಗಿರಬಹುದೆಂದು ಊಹಿಸಲಾಗಿದೆ. ಮುಂದೆ ಈತ ಚಾಳುಕ್ಯರ ಬೆಂಬಲಿಗನಾಗಿ ಅವರು ವೇಂಗಿಯನ್ನು ಮುತ್ತಿದ ಸಂದರ್ಭದಲ್ಲಿ ಅವರಿಗೆ ಸಹಾಯ ನೀಡಿದ. ಆದರೆ ಚಾಳುಕ್ಯ 1ನೆಯ ಸೋಮೇಶ್ವರ ಕಾಲವಾದ ಬಳಿಕ ಅವನ ಹಿರಿಯ ಮಗ ಇಮ್ಮಡಿ ಸೋಮೇಶ್ವರ ಪಟ್ಟಕ್ಕೆ ಬಂದ. ತನ್ನ ಕಿರಿಯ ಸೋದರನಾದ ವಿಕ್ರಮಾದಿತ್ಯನ ಚಟುವಟಿಕೆಗಳನ್ನು ಸಂಶಯ ದೃಷ್ಟಿಯಿಂದ ಕಾಣುತ್ತಿದ್ದ ಈ ಅರಸ ಆತನನ್ನು ಮಾಲವದೇಶದಿಂದ ಹಿಂದಕ್ಕೆ ಕರೆಯಿಸಿಕೊಂಡು. ತಂದೆ ಅನುಸರಿಸಿದ ನೀತಿಯನ್ನು ಬಿಟ್ಟುಕೊಟ್ಟು ಮಾಲವದ ಮೇಲೆ ದಂಡೆತ್ತಿ ಹೋದ. ಇವನ ಚೊತೆಗೆ ಕಳಚುಂ ಕರ್ಣನೂ ಹೊಯ್ಸಳ ಮನೆತನದ ಎ¾Âುಯಂಗ ಮತ್ತು ಉದಯಾದಿತ್ಯರೂ ಸೇರಿಕೊಂಡರು. ಸುಮಾರು 1099-70ರಲ್ಲಿ ನಡೆದ ಈ ಶತ್ರುವಿನ ದಾಳಿಯನ್ನು ಎದುರಿಸಲಾಗದ ಜಯಸಿಂಹ ಕದನದಲ್ಲಿ ಸೋತು ಸಾವನ್ನಪ್ಪಿದ.

8 1255ರಿಂದ 1274ರವರೆಗೆ ಆಳಿದ ಪರಮಾರ ವಂಶದ ಇಮ್ಮಡಿ ಜಯವರ್ಮನನ್ನು 2ನೆಯ ಜಯಸಿಂಹನೆಂದೂ ಕರೆಯಲಾಗಿದೆ. ಈತ ಸೇವುಣ ರಾಮಚಂದ್ರ ಮತ್ತು ಚಾಹಮಾನ ಹಮ್ಮೀರರೊಡನೆ ಕಾದಿದ.

9 1209ರಲ್ಲಿ 3ನೆಯ ಜಯಸಿಂಹನೆಂಬ ಅರಸ ಮಾಲವದೇಶದ ಒಂದು ಭಾಗವನ್ನು ಮಾತ್ರ ಉದಯಪುರ ರಾಜಧಾನಿಯಿಂದ ಆಳುತ್ತಿದ್ದನೆಂಬುದು ತಿಳಿದಿದೆ.

10 ಗುಜರಾತಿನಲ್ಲಿ ಆಳಿದ ಚೌಳುಕ್ಯ ವಂಶಕ್ಕೆ ಸೇರಿದ ಜಯಸಿಂಹ ಕರ್ಣ ಮತ್ತು ಮಯಣಲ್ಲ ದೇವಿಯರಿಗೆ ಜನಿಸಿದ. ಈತ ಸಿದ್ಧರಾಜನೆಂಬ ಬಿರುದನ್ನು ಧರಿಸಿ ಜಯಸಿಂಹ ಸಿದ್ಧರಾಜನೆಂದೇ ಪ್ರಸಿದ್ಧನಾಗಿದ್ದಾನೆ. ಈತ ಅನೇಕ ಕದನಗಳನ್ನು ಹೂಡಿ ಚಾಹಮಾನ, ಪರಮಾರ, ಚಂದೇಲ, ಕಳಚುರಿ ಮುಂತಾದ ಮನೆತನಗಳ ಅರಸರನ್ನು ಎದುರಿಸಿದ. ಹೀಗೆ ಇವನು ವಿರೋಧಿಸಿದವರಲ್ಲಿ ಚಾಳುಕ್ಯ ಆರ್ವಡಿ ವಿಕ್ರಮಾದಿತ್ಯನೂ ಒಬ್ಬ. ಪ್ರಸಿದ್ಧ ಜೈನಪಂಡಿತನಾದ ಹೇಮಚಂದ್ರ ಈತನ ಆಸ್ಥಾನದಲ್ಲಿದ್ದ.

	11 ಕರ್ನಾಟಕದ ಮಾಂಡಲಿಕ ಮನೆತನಗಳಲ್ಲಿ ಒಂದಾದ ಹಾನಗಲ್ಲಿನ ಕದಂಬವಂಶಕ್ಕೆ ಸೇರಿದವನೊಬ್ಬ ಜಯಸಿಂಹ. ಈತ ಆ ಮನೆತನದ ಮೊದಲಿಗನಾದ ಬಟ್ಟಯ್ಯನ ಮಗ. ಈತನಿಗೆ ಐವರು ಮಕ್ಕಳು. ಅವರಲ್ಲಿ ಶಾಂತಯದೇವನ (ಶಾಂತಿವರ್ಮ) ಶಾಸನಗಳು ಲಭಿಸಿವೆ. ಈತನ ಕುರಿತಾದ ಹೆಚ್ಚಿನ ವಿವರಗಳು ದೊರೆತಿಲ್ಲ.				 (ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ